Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಗೌರಿ ಲಂಕೇಶರ '' ಭುಟ್ಟೋ ''

ಭಯೋತ್ಪಾದನೆ, ಸರ್ವಾಧಿಕಾರದಿಂದ ನಲುಗಿ ಹೋಗಿರುವ ಪಾಕಿಸ್ತಾನದ ರಾಜಕೀಯದ ಸ್ಥಿತಿ ಮತ್ತೆ ಅತಂತ್ರದಲ್ಲಿ ಸಿಲುಕಿದೆ. ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಲ್ಲಿನ ರಾಜಕೀಯದಲ್ಲಿ ನೆಹರು ಮತ್ತು ಭುಟ್ಟೋ ಮನೆತನದ ದುರಂತ ಕಥೆಗಳು ಒಂದೇ ತೆರನಾಗಿ ಕಾಣಿಸುತ್ತದೆ. ಆದರೆ ಇವೆರಡೂ ಕುಟುಂಬಗಳ ಅಕಾಲಿಕ ಮೃತ್ಯುಗಳ ಕಾರಣ ಮಾತ್ರ ಬೇರೆ, ಬೇರೆ..

ಅಷ್ಟೇ ಅಲ್ಲ ಎರಡು ಕುಟುಂಬಗಳ ರಾಜಕೀಯ ನಡಾವಳಿಕೆಯೂ ಕೂಡ ಅಷ್ಟೇ ಸಾಮೀಪ್ಯತೆ ಹೊಂದಿದೆ, ನೆಹರು(ಗಾಂಧಿ) ಕುಟುಂಬಕ್ಕೂ ಅಧಿಕಾರ, ಮೋಹ, ಕುಟಿಲತೆ, ಸಂಚುಗಳೆಲ್ಲ ಹ್ಯಾಗೆ ರಾಜಕೀಯದುದ್ದಕ್ಕೂ ಬಳಸಿಕೊಂಡು ಅವರು ಹೆಣೆದ ಬಲೆಯೊಳಕ್ಕೆ ಅವರೇ ಬಲಿಯಾಗುತ್ತ ಹೋದಂತೆ, ಪಾಕಿಸ್ತಾನದ ರಾಜಕಾರಣದಲ್ಲೂ ಜುಲ್ಫಿಕರ್ ಅಲಿ ಭುಟ್ಟೋನನ್ನು ಗಲ್ಲಿಗೇರಿಸಿದ ನಂತರ ಆಧುನಿಕ ದೃಷ್ಟಿಕೋನದ,ಧೀಮಂತ ಮಹಿಳಾ ರಾಜಕಾರಣಿಯಾಗಿ ರೂಪುಗೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಬೆನಜೀರ್ ಕೂಡ ತುಳಿದ ಹಾದಿ ಕೂಡ ಅಷ್ಟೇ ಭ್ರಷ್ಟತನದ್ದಾಗಿತ್ತು....

ಜುಲ್ಫಿಕರ್ ಅಲಿ ಭುಟ್ಟೋ ಕೂಡ ಪಾಕಿಸ್ತಾನದ ಅಧ್ಯಕ್ಷರಾಗಿ, ಪ್ರಧಾನಿಯಾಗಿ ಆರು ವರ್ಷಗಳ ಕಾಲ ಆಡಳಿತ ನಡೆಸಿ, ಜನಪ್ರಿ ಯ ಎನ್ನಿಸಿಕೊಂಡಿದ್ದರೂ ಕೂಡ, ನಂತರದಲ್ಲಿ ದುರಾಡಳಿತ, ಸ್ವಜನ ಪಕ್ಷಪಾತದಿಂದ ಜನರ ಆಕ್ರೋಶಕ್ಕೆ ಈಡಾಗಿದ್ದರು. ಇಂತಹ ಕುಟಿಲ ರಾಜನೀತಿಯಿಂದಾಗಿಯೇ ಜುಲ್ಫಿಕರ್ ಆರು ಹಿರಿಯ ಅಧಿಕಾರಿಗಳ ಅರ್ಹತೆ(!!)ಯನ್ನು ಕಡೆಗಣಿಸಿ ಜಿಯಾ ಉಲ್ ಹಕ್ ಎಂಬ ಕಿರಿಯ ಅಧಿಕಾರಿಯನ್ನು ಪಾಕಿಸ್ತಾನದ ಮುಖ್ಯ ಸೈನ್ಯಾಧಿಕಾರಿಯನ್ನಾಗಿ ನೇಮಿಸಿದ್ದರು.

ವಿಪರ್ಯಾಸ ಅಂದರೆ ಭಸ್ಮಾಸುರ ಮೋಹಿನಿ ಕಥೆಯಂತೆ ಆಯಿತು, ಅರ್ಹರನ್ನು ಕಡೆಗಣಿಸಿ, ಕಿರಿಯನಿಗೆ ಅಧಿಕಾರದ ಗದ್ದುಗೆಗೆ ಏರಿಸಿದ್ದರೋ, ಅದೇ ಜಿಯಾ ಉಲ್ ಹಕ್ 1979ರ ಏಪ್ರಿಲ್ 4ರಂದು ಜುಲ್ಫಿಕರ್ ಅಲಿ ಭುಟ್ಟೋನನ್ನು ಗಲ್ಲಿಗೇರಿಸಿಬಿಟ್ಟಿದ್ದ. ತದನಂತರ ಪುತ್ರಿ ಬೆನಜೀರ್, ಅಲಿ ಪತ್ನಿ ನುಸ್ರತ್ ಸೇರಿದಂತೆ ಪಿಪಿಪಿ ಪಕ್ಷದ 15ಸಾವಿರ ಜನರನ್ನು ಜಿಯಾ ಜೈಲುಕಂಬಿಯ ಹಿಂದೆ ತಳ್ಳಿದ್ದ. ಬಂಧಿಖಾನೆಯೊಳಗೆ ಅನುಭವಿಸಿದ ನರಕಯಾತನೆ, ಭ್ರಷ್ಟ ವ್ಯವಸ್ಥೆ, ಅಮೆರಿಕದ ಹಲಾಲುಕೋರತನ, ಸರ್ವಾಧಿಕಾರದ ವಿರುದ್ಧ ಬೆನಜೀರ್ ರೋಸಿಹೋಗಿದ್ದಳು.

ಕೊನೆಗೆ ಅಮೆರಿಕದ ಮಿತ್ರ ಪೀಟರ್ ಗಾಲ್ಫ್ರೆಥ್ ಮೂಲಕ ಅಮೆರಿಕದಿಂದ ಪಾಕ್ ಮೇಲೆ ಪ್ರಭಾವ ಬೀರಿ, ಬೆನಜೀರ್ ಜೈಲಿನಿಂದ ಬಿಡುಗಡೆಗೊಂಡಿದ್ದಳು. (ಪೀಟರ್ ಮಧ್ಯಸ್ಥಿಕೆಯಲ್ಲಿ ಜಿಯಾ 1984ರಲ್ಲಿ ಬೆನಜೀರ್‌‌ಳನ್ನು ಇಂಗ್ಲೆಂಡಿಗೆ ಗಡೀಪಾರು ಮಾಡಿದ್ದ.)
ಸರ್ವಾಧಿಕಾರದಿಂದ ಮೆರೆಯುತ್ತಿದ್ದ ಜಿಯಾನಿಗೆ ಅಮೆರಿಕದ ಕೃಪಾಕಟಾಕ್ಷ ಇತ್ತು. ಹೀಗೆ ಸಶಕ್ತವಾಗಿ ಬೆಳೆದ ಜಿಯಾ ಕೂಡ ಅಮೆರಿಕಕ್ಕೆ ಸಡ್ಡು ಹೊಡೆಯತೊಡಗಿದ್ದ, ಇಂತಹ ಸಂದರ್ಭದಲ್ಲಿಯೇ 1988ರ ಆಗಸ್ಟ್ 17ರಂದು ಪಾಕಿಸ್ತಾನಿ ಸೈನ್ಯದ ಹಿರಿಯ ಅಧಿಕಾರಿಗಳೊಂದಿಗೆ ಪ್ರಯಾಣಿಸುತ್ತಿದ್ದ ವಿಮಾನ ಆಕಾಶದಲ್ಲೇ ಸ್ಫೋಟಗೊಂಡು ಜಿಯಾ ಬರ್ಬರವಾಗಿ ಹತ್ಯೆಗೀಡಾಗಿದ್ದ. ಇಂದಿಗೂ ಜಿಯಾ ಕೊಲೆ ಚಿದಂಬರ ರಹಸ್ಯವಾಗಿದೆ...

ಏತನ್ಮಧ್ಯೆ ಪಾಕ್ ಜನರು ನೆಮ್ಮದಿಯ ನಿಟ್ಟುಸಿರು ಬಿಡತೊಡಗಿದ್ದರು, 1988ರ ನವೆಂಬರ್ ತಿಂಗಳಿನಲ್ಲಿ ನಡೆದ ಚುನಾವಣೆ ಯಲ್ಲಿ ಪಿಪಿಪಿ ಬಹುಮತ ಗಳಿಸಿತ್ತು. ಆಗ ಮುಸಲ್ಮಾನ ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು 35ರ ಹರೆಯದ ಬೆನಜೀರ್ ಭುಟ್ಟೋ.

ಚಿಕ್ಕಂದಿನಿಂದಲೇ ತಂದೆಯ ರಾಜಕೀಯ ವ್ಯವಹಾರದಲ್ಲಿ ಜೊತೆಯಾಗಿದ್ದ ಭುಟ್ಟೋಗೆ ಎಲ್ಲದರ ಅರಿವಿತ್ತು, ಸರ್ವಾಧಿಕಾರ, ಅಭಿವೃದ್ದಿ, ಷರಿಯತ್ ಬದಲಾವಣೆ, ಸಾಮರಸ್ಯ ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಬೆನಜೀರ್ ಭುಟ್ಟೋ ಪ್ರಧಾನಿಯಾದ ನಂತರ ಪತಿ ಖದೀಮ ಜರ್ದಾರಿ ಮಾಡಿದ ಭ್ರಷ್ಟಾಚಾರವನ್ನೂ ಕಣ್ಣಿದ್ದು ಕುರುಡಳಂತೆ ವರ್ತಿಸತೊಡಗಿದ್ದಳು. ಆತನ ಮೇಲೆ, ಭುಟ್ಟೋ ವಿರುದ್ಧ ಹಲವಾರು ಭ್ರಷ್ಟಾಚಾರ ಆರೋಪಗಳು ದಾಖಲಾದವು. ಭಾರತದೊಂದಿಗೆ ಸ್ನೇಹ ಹಸ್ತ ಚಾಚುವುದಾಗಿ ಹೇಳಿದ್ದ ಆಕೆ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಮೇಲೆ ದಾಳಿ ಮಾಡಲು ಉಗ್ರಗಾಮಿಗಳಿಗೆ ತರಬೇತಿ ನೀಡಲು ಕುಮ್ಮಕ್ಕು ನೀಡಿದ್ದಳು. ಹೀಗೆ ಒಂದೊಂದಾಗಿಯೇ ಬೆನಜೀರ್‌‌ಳ ಮುಖವಾಡ ಬೆತ್ತಲಾಗತೊಡಗಿತ್ತು.

ಮಿ-30 ಪರ್ಸೆಂಟ್ ಜರ್ದಾರಿ ಎಷ್ಟು ಭ್ರಷ್ಟ, ಮುರ್ತಾಜಾ ಭುಟ್ಟೋ ಕೊಲೆ, ಪಾಕಿಸ್ತಾನ ರಾಜಕೀಯ ಒಳಸುಳಿ, ಅವೆಲ್ಲಕ್ಕಿಂತ ಭುಟ್ಟೋ ಎಂಬ ಹೆಸರೇ ಪಕ್ಕಾ ಭಾರತೀಯವಾದದ್ದು, ಬೆನಜೀರ್‌‌ಳ ಮುತ್ತಜ್ಜ ಖುದಾ ಭಕ್ಷ್ ಹರಿಯಾಣ ರಾಜ್ಯದಲ್ಲಿರುವ ಭುಟ್ಟೋ ಕಲಾನ್ ಎಂಬ ಊರಿನಲ್ಲಿ ಬ್ರಿಟಿಷ್ ಸಾಮ್ರಾಜ್ಯದ ರೈಲ್ವೆ ನೌಕರನಾಗಿದ್ದ. ಹೀಗೆ 50 ಪುಟಗಳ ''ಗಿಡುಗಗಳಿಗೆ ಬಲಿಯಾದ ಗಿಳಿ ಬೆನಜೀರ್ '' ಎಂಬ ಕಿರು ಹೊತ್ತಗೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರು ಅಚ್ಚುಕಟ್ಟಾದ ಮಾಹಿತಿಯನ್ನು ಕಟ್ಟಿಕೊಟ್ಟಿದ್ದಾರೆ, ಜ್ಞಾನದಾಹಕ್ಕೆ ಓದಲೇಬೇಕಾದ ಕೃತಿ ಇದಾಗಿದ್ದು, ಗೌರಿಯವರ ಅಕ್ಷರ ಯಾತ್ರೆ ಇದೇ ರೀತಿ ಮುಂದುವರಿಯಲಿ ಎಂಬ ಹಾರೈಕೆ.....


ಪ್ರತಿಸ್ಪಂದನಗಳು

Re: ಗೌರಿ ಲಂಕೇಶರ ಭುಟ್ಟೋ
ಹಕ್ಕು ನಿರಾಕರಣೆ