ರಾಜ್ಯದಲ್ಲಿ ಚರ್ಚ್, ಪ್ರಾರ್ಥನಾ ಮಂದಿರಗಳ ದಾಳಿಯಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು, ಅಧಿಕಾರ ದಾಹದ ಪ್ರತಿಪಕ್ಷ ಅಧಿಕಾರವನ್ನು ಕಸಿದುಕೊಳ್ಳಲು ಕುತಂತ್ರ ನಡೆಸುತ್ತಿದೆ ಎಂಬುದಾಗಿ ಆರೋಪಿಸಿದರೆ, ಜೆಡಿಎಸ್‌ನ ಕುಮಾರಸ್ವಾಮಿಯವರು, ಈ ರಾಜ್ಯ ಹಿಂದೆಂದೂ ಇಂತಹ ನಪುಂಸಕ ಗೃಹಸಚಿವ (ವಿ.ಎಸ್.ಆಚಾರ್ಯ)ರನ್ನೇ ನೋಡೇ ಇಲ್ಲ ಎಂಬಂತಹ ಪರ-ವಿರೋಧದ ಹೇಳಿಕೆಗಳನ್ನು ನೀಡಿದ್ದರು.
ರಾಜಕಾರಣದಲ್ಲಿ ಸಂಚು, ಕುತಂತ್ರ, ಪಿತೂರಿ ಆರೋಪಗಳನ್ನು ಒಬ್ಬೊಬ್ಬರ ಮೇಲೊಬ್ಬರು ಎಸೆಯುತ್ತಲೇ ಇರುತ್ತಾರೆ. ಇದೀಗ ರಾಜ್ಯ ರಾಜಕಾರಣದಲ್ಲಿ ಈ ಬಾರಿ ಅದ್ಯಾಕೋ ವಿಪರೀತಕ್ಕೆ ಹೋಗಿದೆ ಎನ್ನಿಸುವುದರಲ್ಲಿ ಅನುಮಾನವಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಹಿಡಿದು ನೂರು ದಿನಗಳನ್ನು ಪೂರೈಸಿ ಮುನ್ನೆಡೆಯುತ್ತಿರುವ ಈ ಸಮಯದವರೆಗೂ ಒಂದಲ್ಲ, ಒಂದು ಸಂಕಷ್ಟದಲ್ಲಿ ಸರ್ಕಾರ ಸಿಲುಕಿಕೊಂಡಿದೆ.
ಒಂದು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದು ರಾಜ್ಯದ ಜನತೆಯನ್ನು ಸಮಾನ ದೃಷ್ಟಿಯಲ್ಲಿಟ್ಟು ನೋಡಬೇಕಾದದ್ದು ಅದರ ಕರ್ತವ್ಯ. ಅದೇ ರೀತಿ ಆಡಳಿತರೂಢ ಪಕ್ಷ ಎಡವಿದಾಗ ಎಚ್ಚರಿಸಬೇಕಾದ್ದು, ತರಾಟೆಗೆ ತೆಗೆದುಕೊಳ್ಳಬೇಕಾದ ಹಕ್ಕು ಪ್ರತಿಪಕ್ಷಗಳದ್ದು. ಹಾಗಂತ ಸಿಕ್ಕಿದ್ದೇ ಅವಕಾಶ ಅಂತ ಒಬ್ಬರ ಕಾಲೆಳೆಯುವ ಪ್ರಯತ್ನ ಅಧಿಕಾರ ದಾಹದ ಪ್ರತಿರೂಪವೇ.
ಅಲ್ಲದೇ ಹೇಳಿಕೆಗಳ ಮೂಲಕ ಮುಖ್ಯಮಂತ್ರಿಯಾಗಲಿ ಯಾರೇ ಆಗಲಿ ಮತ್ತೊಬ್ಬರ ತೇಜೋವಧೆ ಮಾಡುವಂತಹ ಹೇಳಿಕೆಯನ್ನು ಕೊಡುವ ಮುನ್ನ ಎಚ್ಚರವಹಿಸಬೇಕಾಗಿದ್ದು ಅಷ್ಟೇ ಮುಖ್ಯ. ಯಾಕೆಂದರೆ ಈ ರಾಜ್ಯದ ಮತದಾರರಿಗೆ ಚೆನ್ನಾಗಿ ಗೊತ್ತು.ಅಧಿಕಾರಕ್ಕಾಗಿ ಯಾರು ಸಂಚು ರೂಪಿಸುತ್ತಿದ್ದಾರೆ, ಕುತಂತ್ರ ರಾಜಕೀಯದ ಮೂಲಕ ಏನೆಲ್ಲಾ ನಾಟಕವಾಡಿದ್ದಾರೆ ಮತ್ತು ನಾಟಕವಾಡುತ್ತಿದ್ದಾರೆ ಎಂಬುದು !
ಅದರಲ್ಲೂ ಚರ್ಚ್, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆದ ನಂತರ ಕಾಂಗ್ರೆಸ್ ಸೇರಿದಂತೆ ಆಡಳಿತರೂಢ ಸರ್ಕಾರ ಕೂಡ ತಪ್ಪನ್ನು ಮುಚ್ಚಿಹಾಕುವಲ್ಲಿ ಒಬ್ಬರ ಮೇಲೊಬ್ಬರು ಕೆಸರೆಚಾಟದಲ್ಲಿ ತೊಡಗಿದ್ದರು. ಅಲ್ಲದೇ ರೈತರ ಹತ್ಯೆಯಾದಗಾಗಲಿ, ಇನ್ನಿತರ ಯಾವುದೇ ಗಲಭೆಯಾದಾಗ ಹತ್ತಿರಕ್ಕೂ ಸುಳಿಯದ ಈ ಮಾಜಿ ಧುರೀಣರು ಪ್ರಾರ್ಥನಾ ಮಂದಿರ ದಾಳಿ ಸಂದರ್ಭದಲ್ಲಿ ಇಡೀ ಕಾಂಗ್ರೆಸ್ ದಂಡೇ ಮಂಗಳೂರಿನಲ್ಲಿ ಬೀಡು ಬಿಟ್ಟು ಒಂದರ ಹಿಂದೊಂದರಂತೆ ಪತ್ರಿಕಾಗೋಷ್ಠಿ ಏರ್ಪಡಿಸಿ ಘಟನೆಯನ್ನು ಖಂಡಿಸಿತ್ತು.
ಸಮಾಜದಲ್ಲಿ ನಡೆಯುವ ಸಮಾಜಘಾತುಕ ಘಟನೆಯನ್ನು ಖಂಡಿಸಬೇಕಾದ್ದು ನ್ಯಾಯಯುತವೇ , ಅದೇ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಆಡಳಿತರೂಢ ಸರ್ಕಾರ ಕ್ರಮಕೈಗೊಳ್ಳಬೇಕಾದ್ದು ಅದರ ಧರ್ಮ. ಹಾಗಂತ ಅಷ್ಟು ನಿಷ್ಪಕ್ಷಪಾತವಾಗಿ ಕಾಂಗ್ರೆಸ್ ಆಗಲಿ,ಬಿಜೆಪಿ,ಜೆಡಿಎಸ್ ಯಾವುದು ಹಾಗೇ ಮಾಡಿಲ್ಲ,ಅವರವರ ಆಡಳಿತಾವಧಿಯಲ್ಲಿ ಎಲ್ಲರೂ ಅವರವರ ಕೂಟವನ್ನು ರಕ್ಷಿಸಲು ಹೊರಟವರೇ !.
ಧರ್ಮದ ಹೆಸರಲ್ಲಿ, ಕಾನೂನಿನ ಹೆಸರಲ್ಲಿ, ರಾಜಕೀಯವಾಗಿ ರಾಜ್ಯರಾಜಕಾರಣದಲ್ಲಿ ಈ ಘನಂಧಾರಿ ನಾಯಕರು ನಡೆದುಕೊಂಡ ರೀತಿ ನಮ್ಮ ಕಣ್ಣ ಮುಂದಿದೆ.ಅದಕ್ಕಿಂತಲೂ ವಿಪರ್ಯಾಸ ಎಂದರೆ ಪ್ರತಿಪಕ್ಷದಲ್ಲಿದ್ದಾಗ,ಆಡಳಿತ ಪಕ್ಷದ ಅಧಿಕಾರದ ಗದ್ದುಗೆಯಲ್ಲಿದ್ದಾಗ ಇವರೆಲ್ಲ ಏನೆಲ್ಲಾ ಆಡಿಕೊಂಡಿದ್ದಾರೆ, ಪಕ್ಷಾಂತರವಾದಾಗ ಈ ಮೊದಲು ಯಾರನ್ನು ಹೊಗಳಿ ಅಟ್ಟಕ್ಕೇರಿಸಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೋ ಅವರೇ ಈಗ ಮಾಡುತ್ತಿರುವ 'ನಾಟಕ'ವನ್ನು ರಾಜ್ಯದ ಪ್ರಜ್ಞಾವಂತ ಮತದಾರರನ ಗಮನದಲ್ಲಿದೆ.
ಈಗ ಮುಖ್ಯಮಂತ್ರಿಯವರು ಘಟನೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಹೇಳಿಕೆ ನೀಡುವುದಾಗಲಿ, ತಲೆಮೇಲೆ ಕೈಹೊತ್ತು ಕೂರುವುದರಲ್ಲಿ ಅದ್ಯಾವ ಪುರುಷಾರ್ಥವಿದೆ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯವನ್ನು ತರಾಟೆಗೆ ತೆಗೆದುಕೊಂಡಿದೆ. ಇದೇ ಕೇಂದ್ರ ಸರ್ಕಾರ ಪಶ್ಚಿಮಬಂಗಾಳದಲ್ಲಿ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ನವದ್ವಾರಗಳನ್ನು ಮುಚ್ಚಿ ಕುಳಿತಿತ್ತು.
ಈ ರೀತಿ ತಮ್ಮವರ ಹಾಗೂ ತಮ್ಮ ಅಧಿಕಾರಕ್ಕಾಗಿ ಎಲ್ಲವನ್ನೂ ಮುಚ್ಚಿಟ್ಟು,ರಕ್ಷಿಸುವ ರಾಜಕಾರಣಿಗಳ ಈ ವರ್ತನೆಗೆ ಎಡಬಿಡಂಗಿತನ ಅನ್ನದೇ ಇನ್ನೇನು ಹೇಳಲಿ? ಅಧಿಕಾರಕ್ಕಾಗಿ ಸಂಚು-ಕುತಂತ್ರ ಹೂಡುತ್ತಿದ್ದಾರೆ ಎಂದು ಬೊಬ್ಬಿರಿರುವ ಬದಲು ಆಡಳಿತ ಪಕ್ಷವಿರಲಿ,ವಿರೋಧ ಪಕ್ಷವಿರಲಿ ನಿಷ್ಪಕ್ಷಪಾತ ಧೋರಣೆಯನ್ನು ಮೊದಲು ಮೈಗೂಡಿಸಿಕೊಳ್ಳಬೇಕಾಗಿದೆ.
ಅಧಿಕಾರ ಉಳಿಸಿಕೊಳ್ಳಲು ಮತ್ತು ಅಧಿಕಾರ ಕಸಿಯಲು ಎರಡು ತೆರನಾಗಿಯೂ ರಾಜಕಾರಣಿಗಳು ಶಕುನಿ ತಂತ್ರವನ್ನು ಹೂಡುವುದರಲ್ಲಿ ನಿಸ್ಸೀಮರು ಎಂಬುದನ್ನು ಮೊದಲು ನಾವು ಮನಗಾಣಬೇಕಾಗಿದೆ. ಯಾಕೆಂದರೆ ಕಾಮಾಲೆಕಣ್ಣಿಗೆ ಮಾತ್ರ ಎಲ್ಲವೂ ಹಳದಿಯಾಗಿಯೇ ಕಾಣುತ್ತೆ, ಕಾರಣ ಕಾಂಗ್ರೆಸ್ಸಿಗೆ ಅದು ಮಾಡುವುದೇ ಸರಿ, ಬಿಜೆಪಿಗೆ ಅದರ ಧೋರಣೆಯೇ ಸರಿ ಹಾಗಾದರೆ ತಪ್ಪು ಯಾರದ್ದು.
ಅದಕ್ಕೆ ವಿಮರ್ಶೆಯ ದೃಷ್ಟಿಕೋನದ ಅಗತ್ಯವಿದೆ.ಅಧಿಕಾರ ಎನ್ನುವುದು ಒಬ್ಬರಿಗಾಗಿ ಅನುಭವಿಸಲು ಇರುವ ಸುಖದ ಸುಪ್ಪತ್ತಿಗೆಯಲ್ಲ, ಅಲ್ಲಿ ನೋವು-ನಲಿವು,ಏಳು-ಬೀಳುಗಳೆಲ್ಲವೂ ಇದೆ. ಅದು ಸಂಚೋ-ದುರುದ್ದೇಶವೋ-ಹೌದೋ-ಅಲ್ಲವೋ ಎಂಬುದನ್ನು ಪರಾಮರ್ಷಿಸಬೇಕು.
ಇಂದಿನ ರಾಜಕಾರಣ ಮಾತ್ರ ಅದಕ್ಕೆ ತದ್ವಿರುದ್ಧವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.ಅಧಿಕಾರಕ್ಕಾಗಿ ನಡೆಸಿದ ಸಂಚು ಮತ್ತು ಅದರ ಪರಿಣಾಮ ಏನು ಎಂಬ ಬಗ್ಗೆ ಇತಿಹಾಸ ಮತ್ತು ಪುರಾಣದ ಘಟನೆಗಳನ್ನು ಮತ್ತೊಮ್ಮೆ ಸಿಂಹಾವಲೋಕನ ಮಾಡಿಕೊಂಡರೆ ಎಲ್ಲವೂ ಸ್ಪಷ್ಟವಾಗುತ್ತದೆ.
ಅದಕ್ಕಾಗಿಯೇ ಈ ಸಣ್ಣ ಕಥೆಯೊಂದನ್ನೇ ಸುಮ್ಮನೆ ಓದಿ ನಿಮಗೆ ತಿಳಿಯುತ್ತೆ...
ಇಬ್ಬರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಘೋರ ತಪಸ್ಸು ಮಾಡಲಾರಂಭಿಸಿದ್ದರಂತೆ. ಭಕ್ತರ ತಪಸ್ಸನ್ನು ಮೆಚ್ಚಿದ ಕರುಣಾಮಯಿ ಭಗವಂತ ಪ್ರತ್ಯಕ್ಷನಾಗಿ,ಭಕ್ತ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಏನು ವರ ಬೇಕು ಕೇಳು ಎಂದನಂತೆ. ಮೆಲ್ಲನೆ ಕಣ್ಣು ತೆರೆದ ಭಕ್ತ ಪಕ್ಕದಲ್ಲಿ ನೋಡಿದನಂತೆ,ಆತ ಈತನತ್ತ ನೋಡುತ್ತಿದ್ದನಂತೆ.ಈತನಿಗೆ ತಟ್ಟನೆ ಏನೋ ಹೊಳೆದಂತಾಯಿತು,ದೇವಾ ನನಗೆ ಬೇರೆನೂ ಬೇಡ,ಆತ ನಿನ್ನಲ್ಲಿ ಯಾವ ವರ ಬೇಡಿದ ಎಂಬುದಾಗಿ ಕೇಳಿದ.
ಅದಕ್ಕೆ ದೇವರು,ನೀನು ಏನು ವರ ಕೇಳುತ್ತಿಯೋ ಅದರ ಎರಡು ಪಟ್ಟು ತನಗೆ ದೊರೆಯುಂತೆ ಅನುಗ್ರಹಿಸಲು ಕೇಳಿದ್ದಾನೆ ಎಂದು ಹೇಳಿದ.ಓಹೋ ಹಾಗಾ ವಿಷಯ ಎಂದರಿತ ಈ ಭಕ್ತ ಮಹಾಶಯ, ಹಾಗಾದರೆ ದೇವಾ ನೀನು ನನ್ನ ಒಂದು ಕಣ್ಣು,ಒಂದು ಕಾಲು, ಒಂದು ಕೈ ಹೋಗುವಂತೆ ವರ ನೀಡು ಎಂದಾಗ ದೇವರು ತಥಾಸ್ತು ಎಂದ! (ಈತ ಒಂದು ಕಣ್ಣು, ಒಂದು ಕಾಲು, ಒಂದು ಕಣ್ಣು ಹೋಗುವಂತೆ ಕೇಳಿದ್ದೇ ತಡ ಆತನ ಎರಡು ಕಣ್ಣು, ಎರಡು ಕಾಲು, ಎರಡು ಕೈ ನೆಗೆದು ಬಿದ್ದು ಹೋಯಿತು)
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು