ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಇರಾಕ್, ಇಸ್ರೇಲ್, ಜಮ್ಮು-ಕಾಶ್ಮೀರ ಇಲ್ಲೆಲ್ಲಾ ಗುಂಡಿನ ಮೊರೆತ,ಬಾಂಬ್ ದಾಳಿ ನಿರಂತರ ಸುದ್ದಿಯಾಗಿತ್ತು. ಅಲ್ಲಿನ ಜನರಿಗೆ ಆರಂಭಿಕವಾಗಿ ನಮ್ಮ ದೇಶದಲ್ಲಿ ಇದೆಂಥಹಾ ಬಾಂಬ್ ಸ್ಫೋಟ,ಯಾವ ಸಂದರ್ಭದಲ್ಲಿ ಯಾರ ಪ್ರಾಣ ಹೋಗುತ್ತದೆ ಎಂಬ ಖಬರೆ ಇಲ್ಲದಂತೆ ಅಮಾಯಕರ ಬಲಿ ತೆಗೆದುಕೊಳ್ಳುತ್ತಿದ್ದು ಇದೀಗ ಅಲ್ಲಿನ ಜನರಿಗೆ ದಿನನಿತ್ಯದ ಕಾಯಕದಂತೆ ಬಾಂಬ್ ಸ್ಫೋಟ ಕೂಡ ಮಾಮೂಲಿಯಾದಂತಿದೆ.
ಅದೇ ಸ್ಥಿತಿ ಭಾರತದಲ್ಲಿಯೂ ಅನುರಣಿಸತೊಡಗಿದ್ದು, ಈಗಾಗಲೇ ಸರಣಿ ಸ್ಫೋಟಗಳು ಅಮಾಯಕರ ಪ್ರಾಣವನ್ನು ಆಪೋಶನ ತೆಗೆದುಕೊಳ್ಳತೊಡಗಿದ್ದು, ಮುಂದಿನ ದಿನಗಳಲ್ಲಿ ದೇಶದ ಗಲ್ಲಿ,ಗಲ್ಲಿಗಳಲ್ಲಿ ಇಂತಹ ಕೃತ್ಯಗಳು ಸಂಭವಿಸುವ ಮುನ್ಸೂಚನೆ ದೊರೆಯತೊಡಗಿದೆ.
ಒಂದೆಡೆ ಜೆಹಾದ್ ಹೆಸರಲ್ಲಿ ಮುಸ್ಲಿಂ ಉಗ್ರರ ಅಟ್ಟಹಾಸ ಮಿತಿಮೀರುತ್ತಿದ್ದರೆ, ಮತ್ತೊಂದೆಡೆ ಮತಾಂತರದ ಅವಾಂತರಗಳು ದೇಶದ ಸೌಹಾರ್ದತೆಯನ್ನು ಕೆಡಿಸತೊಡಗಿದೆ. ಐರೋಪ್ಯ ದೇಶಗಳು ಸೇರಿದಂತೆ ಇಂದು ಪ್ರಪಂಚದ ಹಲವು ದೇಶಗಳು ಭಯೋತ್ಪಾದನೆಯ ಕಬಂಧಬಾಹುಗಳಿಂದ ನಲುಗತೊಡಗಿದೆ.2005ರಲ್ಲಿ ಯುರೋಪಿನ ಬೃಹತ್ ರಾಷ್ಟ್ರವಾದ ಫ್ರಾನ್ಸ್ ಉಗ್ರರ ಅಟ್ಟಹಾಸದಿಂದ ತತ್ತರಿಸಿಹೋಗಿತ್ತು.ಇದರಿಂದಾಗಿ 1,100ಕೋಟಿ ರೂಪಾಯಿ ಆಸ್ತಿ-ಪಾಸ್ತಿ ಹಾನಿಯಾಗಿತ್ತು.
ಒಂದು ಅಂದಾಜಿನ ಪ್ರಕಾರ ಫ್ರಾನ್ಸ್‌ನಲ್ಲಿ 50ಲಕ್ಷ ಮುಸ್ಲಿಮರಿದ್ದಾರೆ. ಇದು ಕೂಡ ಪ್ರತ್ಯೇಕತೆ ಮತ್ತು ಹಠಮಾರಿ ಧೋರಣೆಗಳಿಂದಾಗಿಯೇ ಗಲಭೆ ಮೂಲವಾಗಿತ್ತು. ಇಂತಹ ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ 2004ರಲ್ಲಿ ಕಠಿಣ ಕಾನೂನು ಕ್ರಮವನ್ನು ಪ್ರಧಾನಿ ಡೊಮಿನಿಕ್ ಜಾರಿಗೆ ತಂದಿದ್ದರು.
ಅದೇ ರೀತಿ ಇಂಗ್ಲೆಂಡಿನಲ್ಲಿಯೂ ಧಾರ್ಮಿಕ ಪ್ರತ್ಯೇಕತೆಯ ಹೆಸರಲ್ಲಿ ಸಾಲು, ಸಾಲು ಸ್ಫೋಟ ನಡೆಯಲಾರಂಭಿಸಿದವು. ಇಟಲಿಯಲ್ಲಿ ಕೂಡ ಆದರೆ ಅಲ್ಲೆಲ್ಲ ನ್ಯಾಯಾಧೀಶರ ಅನುಮತಿ ಇಲ್ಲದೆಯೇ ಅನುಮಾನ ಬಂದ ಮತ್ತು ಭಯೋತ್ಪಾದಕ ಪಾತಕಿಗಳನ್ನು ಸೆರೆ ಹಿಡಿಯಲು ಅನುಕೂಲವಾಗುಂತೆ ಕಾನೂನನ್ನು ಜಾರಿಗೆ ತಂದಿತ್ತು.
ಈಗ ಮುಖ್ಯ ಪ್ರಶ್ನೆ ಇರುವುದೇ ಇಲ್ಲಿ, ಭಾರತ ಬಹುಸಂಸ್ಕೃತಿಯ ದೇಶ,ಅತೀ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಪಡೆದಿದೆ. ಅವೆಲ್ಲ ನಿಜ ಈ ದೇಶವನ್ನ ಕಳೆದ ಅರ್ಧ ಶತಮಾನಗಳ ಕಾಲ ಆಳಿದ ನಮ್ಮ ನೇತಾರರು ಜಾತಿ-ಧರ್ಮದ ಆಧಾರದ ಮೇಲೆ ವೋಟ್ ಬ್ಯಾಂಕ್ ರಾಜಕಾರಣ ಮೂಲಕ ಸೌಹಾರ್ದತೆಗೆ ಬೆಂಕಿ ಹಚ್ಚಿ,ಇದೀಗ ಲಬೋ,ಲಬೋ ಅಂತ ಬಾಯಿ ಬಡಿದುಕೊಳ್ಳುತ್ತಿದ್ದಾರೆ.
ಬ್ರಿಟಿಷರು 300ವರ್ಷಗಳ ಕಾಲ ಆಳಿಹೋಗಿದ್ದರೆ, ನಮ್ಮ ಭಾರತೀಯ ರಾಜಕಾರಣಿಗಳ ಮನಸ್ಸು ಅದೇ ಕೊಳಚೆಯಲ್ಲಿ ಕೊಳೆಯುತ್ತಿದೆ. ಒಡೆದು ಆಳುವ ನೀತಿ,ಓಲೈಕೆಗಳಿಂದಾಗಿಯೇ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಕಠಿಣವಾದ ಕಾನೂನನ್ನು ತರುವಲ್ಲಿ ವಿಫಲವಾಗಿದೆ.ಇದರಲ್ಲಿ ಎಲ್ಲ ಪಕ್ಷಗಳದ್ದೂ ಸಮಾನ ಪಾಲುದಾರಿಕೆ ಇದೆ.
ನಾವು ಮೊದಲು ಗಮನಿಸಬೇಕಾದ್ದು ರಾಜಕಾರಣಿಗಳ ಇಬ್ಬಗೆಯ ನೀತಿಯನ್ನ,ಮಾಜಿ ಪ್ರಧಾನಿ ಇಂದಿರಾಗಾಂಧಿಯನ್ನು ಸ್ವತಃ ಅಂಗರಕ್ಷಕರೇ ಗುಂಡಿಕ್ಕಿ ಕೊಂದಾಗ ದೆಹಲಿ, ಪಂಜಾಬ್‌ನಲ್ಲಿ ಸಿಖ್‌ರ ನರಮೇಧ ನಡೆಸಲಾಯಿತು. ದೊಂಬೆ-ಗಲಭೆ ನಡೆಸಿತು. ಆದರೆ ಅದರಲ್ಲಿ ಭಾಗಿಯಾದ ಕಾಂಗ್ರೆಸ್ ಪುಡಾರಿಗಳಿಗೆ ಯಾವ ಶಿಕ್ಷೆಯೂ ಆಗಿಲ್ಲ. ಜಗದೀಶ್ ಟೈಟ್ಲರ್‌ನಂತ ಖದೀಮರು ಇನ್ನೂ ಆರಾಮವಾಗಿಯೇ ಇದ್ದಾರೆ.
ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸಲು ಇನ್ನೂ ಮೀನ-ಮೇಷ ಎಣಿಸಲಾಗುತ್ತಿದೆ. ಅದೇ ರೀತಿ ಕಂದಹಾರ್ ವಿಮಾನ ಹೈಜಾಕ್ ಪ್ರಕರಣದಲ್ಲಿಯೂ ಎನ್‌ಡಿಎ ಡೆಡ್ಲಿ ಭಯೋತ್ಪಾದಕ ಮಸೂದ್‌ನನ್ನು ಸ್ವತಃ ವಿದೇಶಾಂಗ ಸಚಿವರೇ ರಾಜಮರ್ಯಾದೆಯಿಂದ ಹೊರಕಳುಹಿಸಿದ್ದರು. ಇದರಲ್ಲಿ ದೇಶದ ಹಿತ ಅಡಗಿದೆ, ಪ್ರಯಾಣಿಕರ ಸುಖ ಅಡಗಿದೆ ಎಂದೆಲ್ಲಾ ನೂರಾರು ಸಮರ್ಥನೆಗಳನ್ನು ನೀಡಬಹುದು !
ಉಗ್ರರನ್ನು ಮಟ್ಟಹಾಕಲು ಫೋಟಾ, ಟಾಡಾ ಕಾಯ್ದೆ ಜಾರಿಯಲ್ಲಿದ್ದಾಗಲೂ ಏನಾಯಿತು. ಟಾಡಾ ಕಾನೂನಿನಡಿಯಲ್ಲಿ ಖದೀಮರನ್ನು ಬಂಧಿಸಿದರೂ ಕೂಡ ಸರಿಯಾದ ಸಾಕ್ಷ್ಯಾಧಾರ ನೀಡಲು ಪೊಲೀಸ್ ಇಲಾಖೆ ವಿಫಲವಾದ ಹಿನ್ನೆಲೆಯಲ್ಲಿ ಮುಕ್ಕಾಲು ಪಾಲು ಕೈದಿಗಳು ಬಂಧಮುಕ್ತರಾದರು !
ಜೆಹಾದ್-ಧಾರ್ಮಿಕ ಮತಾಂಧತೆಯ ಅಮಲಿನಲ್ಲಿ ಇಂತಹದ್ದೇ ಅವಾಂತರಗಳು ನಿರಂತರವಾಗಿ ಮುಂದುವರಿದರೆ, ಮುಂದೆ ನಿಜಕ್ಕೂ ಭಾರತ ದೊಡ್ಡ ಮಟ್ಟದ ಅಪಾಯವನ್ನು ಎದುರಿಸಬೇಕೆಂಬುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ದೇಶದಲ್ಲಿನ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಈ ದೇಶದಲ್ಲಿ ಬದುಕಲು ಅವಕಾಶವೇ ಇಲ್ಲ ಎಂಬಂತಹ ಧೋರಣೆ ನಿಜಕ್ಕೂ ಅಪಾಯಕಾರಿಯಾದದ್ದು.
ರೋಗಕ್ಕೆ ಮದ್ದು ನೀಡಬೇಕೆ ವಿನಃ,ರೋಗಿಯೇ ಬದುಕಿರಬಾರದು ಎಂಬ ನಿಲುವು ಸರಿಯಲ್ಲ.ಬಾಂಬ್ ಹಾಕುವವರು, ಉಗ್ರಗಾಮಿ ಚಟುವಟಿಕೆ ನಡೆಸುತ್ತಿರುವವರು ಮುಸ್ಲಿಂರೇ ಹೌದು.ಹಾಗಂತ ಇಡೀ ಸಮುದಾಯವನ್ನು ನಾಶ ಮಾಡಬೇಕು ಆಗ ಮಾತ್ರ ಶಾಂತಿ, ನೆಮ್ಮದಿ, ಸಮಸ್ಯೆಗೆ ಪರಿಹಾರ ಎಂಬ ಮಂತ್ರ ಪಕ್ಕಾ ಉಗ್ರ ಬಲಪಂಥೀಯವಾದ ಫ್ಯಾಸಿಸಮ್ ಎನ್ನಿಸಿಕೊಳ್ಳುತ್ತೇ.
ಆರ್ಯ ಜನಾಂಗವೇ ಶ್ರೇಷ್ಠ, ಆರ್ಯ ಜನಾಂಗದ ಜರ್ಮನರು ಮಾತ್ರ ಇಡೀ ಜಗತ್ತಿನ ಮೇಲೆ ಅಧಿಕಾರ ನಡೆಸಲೆಂದೇ ವಿಧಿ ನಿಯಾಮಕರಾದವರು. ಜರ್ಮನಿ, ಜರ್ಮನ್‌ರಿಗೆ ಮಾತ್ರ ಸೇರಿದ್ದು, ಜರ್ಮನ್‌ರ ಅಸ್ಮಿತೆ ಕಾಪಾಡಿಕೊಳ್ಳಬೇಕು ಎಂಬುದು ನಾಜಿ ಪಾರ್ಟಿ ನಾಯಕ ಹಿಟ್ಲರ್‌ನ ಮೂಲಮಂತ್ರವಾಗಿತ್ತು.
ಆ ಕಾರಣಕ್ಕಾಗಿಯೇ ಆತ ಅಲ್ಪಸಂಖ್ಯಾತರಾಗಿದ್ದ ಲಕ್ಷಾಂತರ ಯೆಹೂದಿಯನ್ನರನ್ನು ಹತ್ಯೆಗೈದಿದ್ದು. ಇದು ಫ್ಯಾಸಿಸಮ್‌ನ ಹುಟ್ಟು...ಈಗ ನೀವೇ ಆಲೋಚಿಸಿ ಇಡೀ ಜಗತ್ತನ್ನು ಕ್ರೈಸ್ತರನ್ನಾಗಿ ಮಾಡಬೇಕು, ಇಸ್ಲಾಂಮಯ ಮಾಡಬೇಕು ಎಂದು ಹೊರಡುವುದು ಕೂಡ ಫ್ಯಾಸಿಸಮ್ಮೇ, ಅದೇ ರೀತಿ ಭಾರತದಲ್ಲಿ ಹಿಂದೂಗಳು ಮಾತ್ರವೇ ಇರಬೇಕೆಂಬ ಫರ್ಮಾನು ಹಿಟ್ಲರ್‌ನ ಮಂತ್ರಕ್ಕಿಂತ ಭಿನ್ನವಾದುದಲ್ಲ.
ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾದದ್ದು ಕಠಿಣ ಕಾನೂನುನನ್ನು ಜಾರಿಗೆ ತರುವ ಮೂಲಕ, ಪೊಲೀಸ್ ಇಲಾಖೆಯನ್ನು ಬಲಪಡಿಸುವ ಮೂಲಕ ಇದಕ್ಕೆ ಬೇಕಾಗಿರುವುದು ಬಲವಾದ ರಾಜಕೀಯ ಇಚ್ಛಾಶಕ್ತಿ ಅದು ನಮ್ಮಲ್ಲಿ ಇದೆಯೇ ಎಂಬುದು ಮುಖ್ಯಪ್ರಶ್ನೆ......
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು