Welcome, Guest   [ Register | Sign In | Take a tour | Adult Filter: On ]

ಮಹಾತ್ಮನೆಂದರೆ ಅದ್ಯಾಕೆ ಮುನಿಸು...

ಬಾಪೂಜಿ ನಿಮ್ಮ ಬಗ್ಗೆ ಏನೆಂದು ಮಾತನಾಡಿಕೊಳ್ಳಲಿ, ನಿಮ್ಮ ಬಗ್ಗೆ ಮಾತನಾಡುವುದಾಗಲಿ,ಹೆಸರು ಹೇಳುವುದಾಗಲಿ ಎಲ್ಲವೂ ಅಪರಾಧ ಎಂಬಂತೆ ಆಗಬಿಟ್ಟಿದೆ. ಅದ್ಯಾಕೋ ಯುವಪೀಳಿಗೆಗಂತೂ ಗಾಂಧಿ ಎಂಬ ಶಬ್ದ ಕೇಳಿದರೆ ಸಾಕು, ಯಾವ ಜನ್ಮಾಂತರದ ದ್ವೇಷವೇನೋ ಎಂಬ ತೆರನಾಗಿ ಉರಿದು ಬೀಳುತ್ತಾರೆ. ಪಾಪ ಅವರಿಗೇನು ಗೊತ್ತು ನೀವು ಬದುಕಿರುವಾಗಲೇ ಎಲ್ಲ ಒಳಿತು-ಕೆಡುಕುಗಳ ಮಾತುಗಳನ್ನು ಕೇಳಿ ಸೌಹಾರ್ದತೆಗಾಗಿ ಹೋರಾಡಿಯೇ ಹಿಂದು ಬಾಂಧವನಿಂದಲೇ ಹತ್ಯೆಗೊಳಗಾಗಬೇಕಾಯಿತೆಂದು.

ನಿಮ್ಮ ಹೆಸರೀಗ ಕೇವಲ ಸಿನಿಮಾ ಟಾಕೀಸಿನ ಮುಂಭಾಗದಲ್ಲಿ,ರಂಗಸ್ಥಳದ ಎದುರಿನ ನೆಲದ ಮೇಲೆ ಕುಳಿತುಕೊಳ್ಳುವವರಿಗೆ,ಕ್ಲಾಸಿಗೆ ಚಕ್ಕರ್ ಹೊಡೆಯದೇ ಇರುವವರು ಹೀಗೆ ಅಲ್ಲೆಲ್ಲಾ ನಿನ್ನ ಹೆಸರು ಬಳಕೆಯಾಗುತ್ತದೆ. ಇಂವ ದೊಡ್ಡ ಗಾಂಧಿ ಮೊಮ್ಮಗ, ಗಾಂಧಿ ಕ್ಲಾಸ್ ಹೀಗೆ ನಾಮವಿಶೇಷಣಗಳ ಹಣೆಪಟ್ಟಿ ಹಚ್ಚಲಾಗುತ್ತದೆ.

ಈ ದೇಶ ಇಬ್ಭಾಗವಾಗಲು, ಮುಸ್ಲಿಂರನ್ನು ಹೆಗಲ ಮೇಲೆ ಹೊತ್ತುಕೊಂಡು ಓಲೈಕೆ ಮಾಡಿಕೊಂಡು, ಅವರ ಉಳಿವಿಗಾಗಿಯೇ ಉಪವಾಸ , ಅಹಿಂಸೆ ಮಣ್ಣು ಬೂದಿ ಅಂತ ಬ್ಲ್ಯಾಕ್ ಮೇಲ್ ಮಾಡಿಯೇ ಭಾರತೀಯ ಹಿಂದೂಗಳ ಮೇಲೆ ಚಪ್ಪಡಿ ಎಳೆದ ಗಾಂಧಿಯ ಹೆಸರು ಹೇಳಬೇಡಿ. ಆತ ದೊಡ್ಡ ಖದೀಮ ಭಗತ್ ನೇಣಿಗೆ ಏರುವ ಸಂದರ್ಭದಲ್ಲಿಯೂ ದುಂಡು ಮೇಜಿನ ಮಾತುಕತೆಯಲ್ಲಿ ತುಟಿ ಪಿಟಕ್ ಎನ್ನದೇ ಇದ್ದ ಪರಿಣಾಮ ಗಲ್ಲಿಗೇರುವಂತಾಯಿತು, ಭಾರತದ ಪ್ರಥಮ ಪ್ರಧಾನಿ ಸರ್ದಾರ ವಲ್ಲಭಬಾಯಿ ಪಟೇಲ್ ಆಗಬೇಕಾಗಿದ್ದು, ಅದನ್ನು ತಮ್ಮ ಆಪ್ತ ನೆಹರೂಗೆ ಒಪ್ಪಿಸಿದ್ದು ಹೀಗೆ ತಾತಾನ ಮೇಲೆ ಅನೇಕ ಗುರುತರವಾದ ಆಪಾದನೆಗಳಿವೆ.

ಅವೆಲ್ಲಕ್ಕಿಂತ ಹೆಚ್ಚಾಗಿ ತಾತಾ ನೀನೊಬ್ಬ ಕಟ್ಟಾ ಹಿಂದೂ, ಸಂಪ್ರದಾಯವಾದಿ, ಹೇ ರಾಮ್ ಮಂತ್ರ ಜಪಿಸುತ್ತಲೇ ಸರ್ವ ಧರ್ಮ ಸಮನ್ವಯಕ್ಕಾಗಿ ಹೋರಾಡಿದ ಅರೆ ಬೆತ್ತಲೆ ಫಕೀರ ಎಂಬುದು ಪೂರ್ವಾಗ್ರಹ ಪೀಡಿತ ಮನಸ್ಸಿನ ಆಳಕ್ಕೆ ಇಳಿಯುವುದೇ ಇಲ್ಲ. 1948ರ ಆಗೋಸ್ಟ್ 15ರಂದು ಅಮೃತಸರದಲ್ಲಿ ಸಿಖ್ ಸಮುದಾಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ 30 ಮುಸ್ಲಿಂ ಮಹಿಳೆಯರನ್ನು ಬಲವಂತದಿಂದ ಸುತ್ತುಗಟ್ಟಿ ನಗ್ನಗೊಳಿಸಿ ನೃತ್ಯಮಾಡುವಂತೆ ಮಾಡಿದ್ದರು.

ಅಷ್ಟೇ ಅಲ್ಲ ಆ ಗುಂಪಿನಲ್ಲಿದ್ದ ಒಬ್ಬಾಕೆಯನ್ನು ಎಲ್ಲರೆದುರೇ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈ ಸುದ್ದಿ ಪಾಕಿಸ್ತಾನದ ಲಾಹೋರ್‌ಗೆ ತಲುಪಿದಾಗ ಅಲ್ಲಿನ ಗುರುದ್ವಾರದಲ್ಲಿ ಆಶ್ರಯಪಡೆದಿದ್ದ ಸಿಖ್‌ರ ಮೇಲೆ ದಾಳಿ ಮಾಡಿ ಹತ್ಯೆಗೈದರು, ಗುರುದ್ವಾರಕ್ಕೆ ಬೆಂಕಿ ಹಚ್ಚಿ ಎಲ್ಲರನ್ನು ಸುಟ್ಟು ಬೂದಿ ಮಾಡಿದರು. ಹೀಗೆ ಹೊತ್ತಿಕೊಂಡ ಬೆಂಕಿ ಕಿಡಿ ಪಾಣಿಪತ್‌ನಲ್ಲಿ ರಕ್ತದೋಕುಳಿ ಹರಿದಿತ್ತು.

ಆ ಸಂದರ್ಭದಲ್ಲಿಯೇ ಅಲ್ಲವೇ ತಾತ ನೀವು ಯಾವ ಅಂಗರಕ್ಷಕರ ಸಹಾಯವಿಲ್ಲದೇ ಬುಡ್ಡಿದೀಪ ಹಿಡಿದು ಮನೆ, ಮನೆಗೆ ಹೋಗಿ ಅಂಗಲಾಚಿ ಬೇಡಿಕೊಂಡಿರಿ, ದಯವಿಟ್ಟಿ ಹಿಂಸೆ ನಿಲ್ಲಿಸಿ,ಹೋಗಿ ಮುಸ್ಲಿಂರನ್ನು ತಬ್ಬಿಕೊಳ್ಳಿ, ಸೌಹಾರ್ದ ಕಾಪಾಡಿಕೊಳ್ಳಿ ಎಂದಾಗ. ಅವರೇನು ಸುಮ್ಮನಿದ್ದರೇ..ಏಯ್ ಅವರು ನಿನ್ನ ಹೆಂಡತಿಯನ್ನು ಕೆಡಿಸಿದ್ದಾರಾ? ನಿನ್ನ ಮಕ್ಕಳನ್ನು ಕೊಂದಿದ್ದಾರಾ ಅಂತ ಮುಖಕ್ಕೆ ಹೊಡೆದಂತಹ ಪ್ರಶ್ನೆಗಳನ್ನು ಎಸೆದಿದ್ದರು. ಅದಕ್ಕೂ ಕೋಪ ಮಾಡಿಕೊಳ್ಳದ ತಾವು ಹೌದು ನನ್ನ ಹೆಂಡತಿಯನ್ನೇ ಕೆಡಿಸಿದ್ದು, ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಂಗಸರು, ಸತ್ತ ಮಕ್ಕಳು ಎಲ್ಲಾ ನನ್ನವರೇ ಎಂದು ಹೇಳಿ ಬಾಯ್ಮುಚ್ಚಿಸಿದಿರಿ.

ಬಳಿಕ ಒಬ್ಬರ ರುಂಡವನ್ನು ಮತ್ತೊಬ್ಬರು ಚೆಂಡಾಡುತ್ತಿದ್ದ ಜನರು ಶಾಂತ ಸ್ಥಿತಿಗೆ ಬಂದಿದ್ದು,ಅದೆಂತಹಾ ಮಾಯೆ.ಹಾಗಾದರೆ ಇದು ನೀವು ಮಾಡಿದ ತಪ್ಪೇ ? ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಮನಸ್ಥಿತಿಗೆ ನಿಮ್ಮ ಅಹಿಂಸೆ, ಕೋಮು ಸೌಹಾರ್ದತೆ ಬೇಡವಾಯಿತೇ? ಸ್ವತಃ ನಿಮ್ಮ ಮಗ ಹರಿಲಾಲ್ ಗಾಂಧಿಯೇ ಮುಸ್ಲಿಂ ಧರ್ಮಕ್ಕೆ ಮತಾಂತರನಾಗಿ ಮದುವೆಯಾದಾಗಲು ತಾವು ಸುಮ್ಮನಿದ್ದೀರಾ, ಆತನಿಗೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಳ್ಳುಂತೆ ಪಕ್ಕಾ ಹಿಂದೂವಿನಂತೆ ವರ್ತಿಸಿದ್ದೀರಲ್ಲವೇ ? ಜೀವಮಾನ ಪೂರ್ತಿ ಅಹಿಂಸೆಯಲ್ಲಿ ಹೋರಾಟ ನಡೆಸಿದ ನಿಮ್ಮ ತತ್ವ,ಮಾತುಗಳು ಯಾರಿಗೂ ಪಥ್ಯವಾದಂತಿಲ್ಲ.

ಅಷ್ಟಾದರೂ ನಿಮ್ಮ ತ್ಯಾಗವೇ ಬೂಟಾಟಿಕೆ ಎಂಬಷ್ಟರ ಮಟ್ಟಿಗೆ ದೂರಲಾಗುತ್ತದೆ. ಅದಕ್ಕಾಗಿಯೇ ಅಲ್ಲವೇ ನಿಮಗೆ ನೊಬೆಲ್ ನೀಡಿಲ್ಲ,ಹೋಗಲಿ ಕನಿಷ್ಠ ಪಕ್ಷ ವಸಾಹತುಶಾಹಿಗಳ ಬೂಟುನೆಕ್ಕುವವರಿಗಾಗಿಯೇ ನೀಡುತ್ತಿದ್ದ 'ಸರ್ 'ಪದವಿಗೂ ನಿಮ್ಮನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಯಿತು. ಹೋಗಲಿ ನಿಮ್ಮ ಯೋಗ್ಯತೆ ಅದ್ಯಾವ ಜುಜುಬಿ ಪದವಿಗಳು.ನಿಮ್ಮಂತೆಯೇ ಅರಮನೆ, ಹಣ, ಅಂತಸ್ತು ಎಲ್ಲವನ್ನೂ ತ್ಯಾಗ ಮಾಡಿ ಬೀದಿಗೆ ಬಂದ ಗೌತಮ ಬುದ್ಧನನ್ನೇ ನಾವು ಇಲ್ಲಿಂದ ಓಡಿಸಿದವರಲ್ಲವೇ ?ನಿಮ್ಮ ಗತಿಯೂ ಅದಕ್ಕಿಂತ ಭಿನ್ನವಾಗಲಾರದು ಎಂಬ ಸಂಶಯ ಕಾಡುತ್ತಿದೆ.

ಬೌದ್ಧಧರ್ಮ ಭಾರತದಿಂದ ಕಣ್ಮರೆಯಾದರೂ, ಬೇರೆಡೆ ಅಷ್ಟೇ ಪ್ರಭಾವಶಾಲಿಯಾಗಿ ತಳವೂರಿದೆ, ನೀವು ಹಾಗೇ ತಾತ ನಿಮ್ಮ ಅಹಿಂಸೆ, ಗ್ರಾಮಸ್ವರಾಜ್ಯ,ಸ್ವದೇಶಿ ಯಾರಿಗೂ ಬೇಡ, ನಿಮ್ಮ ಚಿಂತನೆ, ಆದರ್ಶಗಳತ್ತ ವಿದೇಶಿಗರು ಬೆರಗುಗಣ್ಣಿನಿಂದ ನೋಡಿ, ಅಪ್ಪಿಕೊಳ್ಳಲಾರಂಭಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಏನೇನೂ ದಾಖಲಾಗುತ್ತವೆ.ಹಾಗೇ ತಾತಾ ನಿಮ್ಮ ಹೆಸರು ಕೂಡ ಬುದ್ಧನಂತೆ ಭಾರತದಿಂದ ಕಣ್ಣರೆಯಾದ ಗಾಂಧಿ,ಗಾಂಧಿ ತತ್ವ ಹೀಗೆ ದಾಖಲಾಗುತ್ತ ಹೋಗಬಹುದು.....!

ಪ್ರತಿಸ್ಪಂದನಗಳು

Re: ಮಹಾತ್ಮನೆಂದರೆ ಅದ್ಯಾಕೆ ಮುನಿಸು...
ಗಾಂಧೀಜಿಯವರ ಕುರಿತು ನೈಜ ಚಿತ್ರಣ ನೀಡಿದ್ದೀರಿ. ಅವರ ಬಗೆಗಿನ ಆರೋಪಗಳನ್ನು ನೀವು ಪ್ರಸ್ತಾಪಿಸುತ್ತೀರೋ ಇಲ್ಲವೋ ಎಂದು ನಿಮ್ಮ ಲೇಖನದ ಆರಂಭದ ಭಾಗ ಓದುವಾಗ ಯೋಚಿಸುತ್ತಿದ್ದೆ. ಆದರೆ ಅದನ್ನೂ ಸಹ ಪ್ರಸ್ತಾಪಿಸಿದ್ದೀರಿ. ಉತ್ತಮವಾದ ಲೇಖನ. ಗಾಂಧೀಜಿಯವರ ಬಗ್ಗೆ ಪರ-ವಿರೋಧ ನಿಲುವುಗಳೇನೇ ಇರಲಿ, ಅವರನ್ನು ಪ್ರತಿಯೊಬ್ಬ ಭಾರತೀಯನೂ ಗೌರವಿಸಬೇಕಾದ್ದು ಆದ್ಯ ಕರ್ತವ್ಯ.
Re: ಮಹಾತ್ಮನೆಂದರೆ ಅದ್ಯಾಕೆ ಮುನಿಸು...
ತ್ರಾಸಿಯವರೇ, ಗಾಂಧೀ ಬಗ್ಗೆ ಇಷ್ಟೊಂದು ಹೊಗಳುವ ನಿಮಗೆ ಬಹುಶಃ ಅವರ ಇನ್ನೊಂದು ಮುಖ ಗೊತ್ತಿಲ್ಲವೋ ಏನೋ ? ಅಥವಾ ಗೊತ್ತಿದ್ದರೂ ಗೊತ್ತಿಲ್ಲದಂತಹ ನಾಟಕವೋ ? ಒಂದು ವೇಳೆ ನಿಜವಾಗಿಯು ಗೊತ್ತಿಲ್ಲದಿದ್ದರೆ ಒಮ್ಮೆ ಆ ಬಗ್ಗೆಯೂ ಓದಿ ಬಂದು ಬರೆದರೆ ತುಂಬಾ ಉಪಕಾರ.
Re: ಮಹಾತ್ಮನೆಂದರೆ ಅದ್ಯಾಕೆ ಮುನಿಸು...
ಅನಾಮಿಕ ಬಂಧುವೇ, ತಾವು ಹೇಳಿದ ಗಾಂಧಿ ಬಗ್ಗೆ ಇನ್ನು ಓದಿ ಬಂದು ಬರೆಯುವ ಅಗತ್ಯಕ್ಕಿಂತ ತಾವೇ ಒಂದೆರಡು ಸಾಲು ಬರೆದಿದ್ದರೆ, ನಾನು ತಿಳಿದುಕೊಳ್ಳುತ್ತಿದ್ದೆ. ಬಹುಶ ಗಾಂಧಿ ಸಂಬಂಧಿಸಿದಂತೆ ಪರ-ವಿರೋಧ ಸೇರಿದಂತೆ ಹಲವು ಪುಸ್ತಕಗಳನ್ನು ಓದಿರುವೆ, ತಾವು ಅದ್ಯಾವ ಪುಸ್ತಕ ಪುಸ್ತಕ ಓದಿದ್ದೀರಿ ಅಂತ ಹೆಸರನ್ನಾದರೂ ಸೂಚಿಸಿ ಅದನ್ನು ಒಮ್ಮೆ ಓದುತ್ತೇನೆ. ಓದುವವನಿಗೆ ಮಡಿ-ಮೈಲಿಗೆ ಇರಬಾರದು. ಅಲ್ಲದೇ ಗಾಂಧಿ ಬಗ್ಗೆ ನಾಟಕ ಮಾಡುವ ಅಗತ್ಯವಿಲ್ಲ, ಯಾಕೆಂದರೆ ಗಾಂಧಿ ವ್ಯಕ್ತಿತ್ವದವನ್ನು ಅರೆಬರೆಯಾಗಿ ತಿಳಿದರೆ ಮಾತ್ರ ಈ ರೀತಿ ಮಾತನಾಡಲು ಸಾಧ್ಯ ಅಂತ ಭಾವಿಸುತ್ತೇನೆ. ನಾನು ಲೇಖನದಲ್ಲಿ ಗಾಂಧಿ ಬಗ್ಗೆ ಇರುವ ಆರೋಪವನ್ನು ಉಲ್ಲೇಖಿಸಿದ್ದೇನೆ. ನೀವು ಓದುವಾಗ ಅದನ್ನೇ ವಿಶ್ಲೇಷಿಸಿದ್ದರೆ ತಮಗೆ ಗಾಂಧಿ ಪರಿಚಯವಾಗುತ್ತಿತ್ತು, ಬಹುಶಃ ಬಾಯಿಗೆ ಬಂದಹಾಗೆ ಬೈದಿದ್ದರೆ ತಾವು ಬಹುಪರಾಕ್ ಹೇಳುತ್ತಿದ್ದರೇನೋ...... ನಾಗೇಂದ್ರ ತ್ರಾಸಿ
Re: ಮಹಾತ್ಮನೆಂದರೆ ಅದ್ಯಾಕೆ ಮುನಿಸು...
Trasiyavare thumba uthamavada lekhana. Gandheeji bagge thiliyada vicharagalannu thilisidhakke dhanyavadagalu. Innashtu inthaha barahagalu nimma shodhadalli moodibarali.
Re: ಮಹಾತ್ಮನೆಂದರೆ ಅದ್ಯಾಕೆ ಮುನಿಸು...
ಶ್ರೇಷ್ಟಮಟ್ಟದ ಚಿಂತನೆಯಿರುವವರಿಗೆ ಶ್ರೇಷ್ಟರ ಗುಣಗಳ ಅರಿವಾಗುತ್ತದೆ. ಬೂಟಾಟಿಕೆ ಇತಿಹಾಸಕಾರರ ಪುಸ್ತಕಗಳನ್ನು ಓದಿ ತಮ್ಮನ್ನು ತಾವು ಪಂಡಿತರು ಎನ್ನುವ ದುರಾಭಿಮಾನ ಬೇಡ. ಕಣ್ಣಿಗೆ ಕಂಡಿದ್ದೆಲ್ಲ ಸತ್ಯವಲ್ಲ ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು. ಹುಟ್ಟಾ ಶ್ರೀಮಂತ ಕುಟುಬಂದಲ್ಲಿ ಹುಟ್ಟಿ ಬಂದ ಗಾಂಧಿಗೆ ಹೋರಾಟ ಬೇಕಿತ್ತೇ.? ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿಯಾಗುತ್ತೇನೆ ಎಂದರೆ ತಡೆಯುವರಾರಾದರೂ ಇದ್ದರೇ? ಆದರೆ ಯಾವುದನ್ನು ಬಯಸದೇ ಹಿಂದೂ ಮುಸ್ಲಿಂರು ಸಹೋದರತೆಯಿಂದ ಬಾಳ್ವೆ ಮಾಡಿ ಎಂದು ಹೇಳಿದ್ದು ತಪ್ಪೆ. ಕೆಲ ಧರ್ಮಾಂಧರು( ಹಿಂದೂ ಅಥವಾ ಮುಸ್ಲಿಂ) ಮಾಡಿದೆ ತಪ್ಪಿಗೆ ಗಾಂಧಿಯನ್ನು ಆರೋಪಿಯನ್ನಾಗಿಸುವುದು ಸರಿಯೇ? ಮಾನವಿಯತೇಯೇ ಬದುಕಿನ ಮೂಲಮಂತ್ರ ಎಂದ ಪಿತಾಮಹನನ್ನು ಅವಹೇಳನ ಮಾಡುವುದು ನ್ಯಾಯವೇ? ಮನುಷ್ಯನೆಂದ ಮೇಲೆ ತಪ್ಪುಗಳು ಸಹಜ. ಆದರೆ ಮನುಷ್ಯನಲ್ಲಿನ ಒಳ್ಳೆಯ ಗುಣಗಳನ್ನು ಗಣನೆಗೆ ತೆಗೆದುಕೊಂಡಾಗ ಮಾತ್ರ ಜೀವನ ಮುಂದುವರಿಯಲು ಸಾಧ್ಯ. ಹಾಗಾದರೇ ನೀವ್ಯಾರು ಜೀವನದಲ್ಲಿ ತಪ್ಪು ಮಾಡಿಲ್ಲ ಎಂದು ಪ್ರಮಾಣ ಮಾಡಿ. ಉತ್ತಮ ಲೇಖನ..ಹೇಗೆ ಸಾಗಲಿ ನಿಮ್ಮ ಲೇಖನಿಯ ಪಯಣ ಧನ್ಯವಾದಗಳು.
Re: ಮಹಾತ್ಮನೆಂದರೆ ಅದ್ಯಾಕೆ ಮುನಿಸು...
ಯಾರೊ ಅಜ್ಞಾತ ವ್ಯಕ್ತಿಯೊಬ್ಬರು ಗಾಂಧಿಯ ಇನ್ನೊಂದು ಮುಖದ ಬಗ್ಗೆ ತಿಳಿದುಕೊಂಡು ಬರೆಯಿರಿ ಎಂದು ಗಾಂಧಿಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಗಾಂಧಿ ಮನಸ್ಸು ಮಾಡಿದ್ದರೆ ಸುಖದ ಸುಪ್ಪತ್ತಿಗೆಯಲ್ಲಿ ತೇಲಬಹುದಿತ್ತು. ಆದರೆ ಸುಖ, ಸಂಪತ್ತು, ವೈಭವ ಎಲ್ಲವನ್ನೂ ತೊರೆದು ದೇಶದ ಹಿತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರೆನ್ನುವುದನ್ನು ಆ ಅನಾಮಧೇಯ ವ್ಯಕ್ತಿ ತಿಳಿದಿರಲಿ. ಭಯೋತ್ಪಾದಕತೆಯಿಂದ ದೇಶ ತಲ್ಲಣಿಸಿರುವ ಇಂದಿನ ಪರಿಸ್ಥಿತಿಯಲ್ಲಿ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸಾವಾದ ಇಂದಿಗೂ ಪ್ರಸ್ತುತ ಎನ್ನುವುದರ ಅರಿವಾಗುತ್ತದೆ. ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ಸ್ನೇಹದ ಕೊಂಡಿ ಬೆಸೆಯಲು ಗಾಂಧಿ ಪ್ರಯತ್ನಿಸಿದರು. ಆದರೆ ಕೆಲವು ಧರ್ಮಾಂಧರ, ಕೆಲವು ಪರಧರ್ಮ ದ್ವೇಷಿಗಳ ಹಿಂಸಾಚಾರಕ್ಕೆ ಸಿಕ್ಕಿ ಭಾರತ ನಲುಗುತ್ತಿದೆ. ಗಾಂಧಿ ಅಸ್ಪ್ರಶ್ಯತೆ ನಿವಾರಣೆಗೆ ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ಇಂದಿಗೂ ಅಸ್ಪ್ರಶ್ಯತೆ ಜೀವಂತವಾಗಿ ಉಳಿದಿರುವುದು, ಗಾಂಧಿಯಂತ ಮಹಾತ್ಮರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ನಮ್ಮ ದೇಶದ ದುರಂತವೆನಿಸಿದೆ.
ಹಕ್ಕು ನಿರಾಕರಣೆ