ದೇಶದ ಆರ್ಥಿಕ ವಹಿವಾಟಿನ ಬೆನ್ನಲುಬಾಗಿರುವ ವಾಣಿಜ್ಯ ನಗರಿ ಮುಂಬೈಯಲ್ಲಿ 1993ರಲ್ಲಿ ಖತರ್‌ನಾಕ್ ಉಗ್ರರು ಸರಣಿ ಬಾಂಬ್ ಸ್ಫೋಟದ ದಾಳಿ ನಡೆಸಿದ್ದರು. ಈ ಸ್ಫೋಟ ಸಂಭವಿಸಿ 15 ವರ್ಷಗಳಾಗುತ್ತ ಬಂತು. ಆ ಘಟನೆಯಿಂದ ಆರಂಭಿಸಿ ಈವರೆಗೂ ದೇಶಾದ್ಯಂತ ಉಗ್ರರು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಲೇ ತಮ್ಮ ದುಷ್ಕೃತ್ಯದ ಅಟ್ಟಹಾಸವನ್ನು ಮುಂದುವರಿಸಿದ್ದಾರೆ.
ಪ್ರತಿ ಸಂದರ್ಭದಲ್ಲೂ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳು ಇಂತಹದ್ದೊಂದು ಘಟನೆ ನಡೆಯಬಾರದಿತ್ತು, ಕೆಲವು ತಿಂಗಳ ಹಿಂದೆಯೇ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿತ್ತು, ಇನ್ನು ಮುಂದೆ ಇಂತಹ ಘಟನೆ ಸಂಭವಿಸಿದಂತೆ ಎಚ್ಚರ ವಹಿಸುತ್ತೇವೆ ಎಂಬಂತಹ ಎಡಬಿಡಂಗಿತನದ ಹೇಳಿಕೆ ನೀಡುತ್ತಲೇ ಷಂಡ ರಾಜಕಾರಣಿಗಳು ಐಷಾರಾಮವಾಗಿ ಕಾಲ ಕಳೆಯುತ್ತಿರುವುದನ್ನು ನೋಡಿದರೆ ಅಹಸ್ಯ ಮೂಡಿಸುತ್ತೆ.
ಅಮೆರಿಕದ ಪ್ರಮುಖ ವಾಣಿಜ್ಯ ಕೇಂದ್ರವಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001 ಸೆಪ್ಟೆಂಬರ್ 11ರಂದು ಉಗ್ರರು ದಾಳಿ ನಡೆಸುವ ಮೂಲಕ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ದೇಶವೇ ಬೆಚ್ಚಿ ಬಿದ್ದಿತ್ತು. ಹಾಗಂತ ಆ ದೇಶದ ರಾಜಕಾರಣಿಗಳು, ಅಧ್ಯಕ್ಷರು ಪಡಪೋಷಿತನ ತೋರಿಸಿಲ್ಲ, ಆ ಘಟನೆಯ ಬಳಿಕ ಅಲ್ ಕೈದಾ, ತಾಲಿಬಾನ್ ಎಷ್ಟೇ ಗಂಟಲು ಹರಿದುಕೊಂಡರು ಕೂಡ ಅಮೆರಿಕದ ಕೂದಲನ್ನು ಎರಡನೇ ಬಾರಿ ಕೊಂಕಿಸಲು ಸಾಧ್ಯವಾಗಿಲ್ಲ.
ಅವೆಲ್ಲಕ್ಕಿಂತ ಚಿಂತಿಗೀಡು ಮಾಡುವ ವಿಷಯ ಏನೆಂದರೆ, ಮುಂಬೈ ಸ್ಫೋಟದ ನಂತರವೂ ಉಗ್ರರು ಲೀಲಾಜಾಲವಾಗಿ ಸ್ಫೋಟ ಕೃತ್ಯವನ್ನು ಎಸಗುತ್ತಲೇ ಇದ್ದರೂ ಕೂಡ, ಜನಸಾಮಾನ್ಯರಿಗೆ ವ್ಯವಸ್ಥಿತ ರಕ್ಷಣೆ ನೀಡಲು ಇನ್ನೂ ಸಾಧ್ಯವಾಗಿಲ್ಲ. ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್‌ಗಳೊಳಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ಸುರಿಮಳೆಗೆರೆದಿದ್ದಾರೆ. ಈ ಘಟನೆ ನ.27ರ ರಾತ್ರಿ 9.30ಕ್ಕೆ, ಆದರೆ ಎನ್ಎಸ್‌ಜಿ ಕಮಾಂಡೋಗಳ ಕಾರ್ಯಾಚರಣೆ ಆರಂಭಗೊಂಡಿದ್ದು, ಮರುದಿನ ಬೆಳಿಗ್ಗೆ 7ಕ್ಕೆ!!.
ಇಲ್ಲಿ ನಾನು ಎನ್‌ಎಸ್‌ಜಿಯನ್ನು ತೆಗಳುತ್ತಿಲ್ಲ. ಏನೇ ಆದರು ಶಂಖದಿಂದ ತೀರ್ಥ ಎಂಬಂತೆ, ದೆಹಲಿಯಿಂದ ಕಮಾಂಡೋ ಪಡೆ ಆಗಮಿಸಿ ಉಗ್ರರನ್ನು ಸದೆಬಡಿಯುವಷ್ಟರಲ್ಲಿ ಅವರೇನು ಕಡಲೆ ತಿನ್ನುತ್ತ ಕೂತಿರುತ್ತಾರಾ? ಅದೇ ರೀತಿ ಇತ್ತೀಚೆಗಷ್ಟೇ ಹುಬ್ಬಳ್ಳಿ ಸಮೀಪದ ಕಿರು ಸೇತುವೆಯೊಂದರ ಬಳಿ ಬಾಂಬ್ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು, ಆದರೆ ಬಾಂಬ್ ನಿಷ್ಕ್ರಿಯ ದಳ ಇರುವುದು ಬೆಂಗಳೂರಿನಲ್ಲಿ. ಅವರು ತಯಾರಿ ನಡೆಸಿ ಆ ಸ್ಥಳ ತಲುಪುವಾಗ ರಾತ್ರಿ 8ಗಂಟೆ ಕಳೆದಿತ್ತು!!...ಹಾಗಾದರೆ ಉಗ್ರರ ನಿಗ್ರಹಕ್ಕೆ ವ್ಯವಸ್ಥಿತವಾದ ದಾರಿ ಕಂಡುಕೊಳ್ಳುವುದಾದರು ಯಾವಾಗ?
ಇಷ್ಟೆಲ್ಲಾ ಸ್ಫೋಟ, ದಾಳಿ ನಡೆಯುತ್ತಿದ್ದರೂ ಕೂಡ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ, ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದು ಮತ್ತೆ ಸುಮ್ಮನಾಗುವುದು. ಮತ್ತೊಂದು ಅಂತಹುದೇ ದಾಳಿ ನಡೆದಾಗ ಮತ್ತೆ ಎಚ್ಚೆತ್ತುಕೊಳ್ಳುವುದು. ಹೀಗೆ ನಡೆದರೆ ಇನ್ನು ಮುಂದೆ ಎಲ್ಲಿಯೂ ನೆಮ್ಮದಿಯಿಂದ ತಿರುಗಾಡಲು ಸಾಧ್ಯವಿಲ್ಲದಂತಾಗುವ ಪರಿಸ್ಥಿತಿ ದೂರವಿಲ್ಲ ಎಂದೇ ಹೇಳಬೇಕಾಗುತ್ತದೆ.
ಮುಂಬೈ ಮೇಲೆ ಮತ್ತೆ ದಾಳಿ ನಡೆಯಲಿದೆ ಎಂಬ ಮುನ್ಸೂಚನೆ ಒಂದು ತಿಂಗಳ ಮೊದಲೇ ಅಮೆರಿಕದ ಗುಪ್ತಚರ ಇಲಾಖೆ ನೀಡಿತ್ತು. ಅದಕ್ಕಿಂತಲೂ ಹೆಚ್ಚಾಗಿ ಮುಂಬೈ ಸರಣಿ ಬಾಂಬ್ ಸ್ಫೋಟದ ಬಳಿಕ ಎಷ್ಟು ಸರಣಿ ಸ್ಫೋಟಗಳು ನಡೆದವು. ಅಲ್ಲದೇ ಮೊನ್ನೆ ನಡೆದ ದಾಳಿಯಲ್ಲಿ ತಾಜ್ ಹೋಟೆಲ್‌ನಲ್ಲಿ ಕಳೆದ ಒಂದು ವರ್ಷದಿಂದ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದವನು ಉಗ್ರ ಎಂಬ ಆಘಾತಕಾರಿ ಅಂಶವು ಹೊರಬಿದ್ದಿದೆ. ಇತ್ತೀಚೆಗೆ ನಡೆದ ಸ್ಫೋಟ ಘಟನೆಗಳಲ್ಲೆಲ್ಲಾ ಸುಶಿಕ್ಷಿತ ಮುಸ್ಲಿಂ ಸಮುದಾಯದ ಯುವಕರೇ ವ್ಯವಸ್ಥಿತವಾಗಿ ಇಂತಹ ದುಷ್ಕೃತ್ಯವನ್ನು ಎಸಗುತ್ತಿದ್ದಾರೆ.
ಈಗ ನಮ್ಮ ಮುಂದಿರುವ ಪ್ರಶ್ನೆ ಮುಖ್ಯವಾಗಿ, ಉಗ್ರರು ಈ ಮೊದಲಿನಿಂದಲೂ ಬಳಸುತ್ತ ಬಂದಿರುವುದು ಸಮುದ್ರ ಮಾರ್ಗವನ್ನೇ, ಮಂಗಳೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ತದಡಿ, ಗೋವಾ ಕರಾವಳಿ ತೀರದಲ್ಲಿ ಅದೆಷ್ಟು ಭದ್ರತೆ ಇದೆ. ಕಳೆದ ಹತ್ತು ವರ್ಷಗಳ ಹಿಂದೆ ಭಟ್ಕಳ ಕೋಮುಗಲಭೆ ಸಂದರ್ಭದಲ್ಲಿಯೂ ಉಗ್ರರು ಸಮುದ್ರ ಮಾರ್ಗವಾಗಿಯೇ ಸ್ಫೋಟ,ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದರೆಂಬ ಮಾಹಿತಿ ಬಹಿರಂಗಗೊಂಡಿತ್ತು. ಅಷ್ಟೇ ಅಲ್ಲ ಭಟ್ಕಳ, ಶಿರಾಲಿ, ಗಂಗೊಳ್ಳಿ, ಮಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿನ ಯುವತಿಯರನ್ನು ಹಲವು ಪಾಕಿಸ್ತಾನಿಯರು ಮದುವೆಯಾಗಿದ್ದಾರೆ ಅಂಶ ಕೂಡ ಕೇಂದ್ರ ಗುಪ್ತಚರ ದಳಕ್ಕೆ ಮಾಹಿತಿ ಇದೆ.
ಆ ನಿಟ್ಟಿನಲ್ಲಿ ಮಂಗಳೂರು, ಭಟ್ಕಳ, ಗಂಗೊಳ್ಳಿ, ಮಲ್ಪೆ, ಗೋವಾ ಪ್ರದೇಶಗಳಲ್ಲಿ ಎಷ್ಟು ಹಡಗುಗಳಿವೆ, ಎಷ್ಟು ವಿದೇಶಿ ಬೋಟುಗಳು ಬರುತ್ತವೆ, ಎಷ್ಟು ಮಂದಿ ಸ್ಥಳೀಯರ ಕೈವಾಡ ಇದೆ ಎಂಬ ನಿಖರ ಮಾಹಿತಿ ಕರಾವಳಿ ಪಡೆಗೂ ಇಲ್ಲ, ಪೊಲೀಸ್ ಇಲಾಖೆ ಹತ್ತಿರವೂ ಇಲ್ಲ, ಅದೇ ತೆರನಾಗಿ ಈ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ವಿದೇಶಿಯರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಿದ್ದ ಮೇಲೆ ಈಗಾಗಲೇ ಉಗ್ರರು ಬಳಿ ಇರುವಷ್ಟು ನಿಖರವಾದ ಮಾಹಿತಿ ನಮ್ಮ ಇಲಾಖೆಯ ಬಳಿ ಇಲ್ಲ ಎನ್ನುವುದೇ ಒಂದು ದೊಡ್ಡ ವಿಪರ್ಯಾಸ. ಕರ್ನಾಟಕದ ಪ್ರಮುಖ ಸ್ಥಳವಾದ ಬೆಂಗಳೂರು, ಮೈಸೂರು, ಕನ್ನಂಬಾಡಿ ಆಣೆಕಟ್ಟು, ಕೈಗಾ, ಕಾರವಾರ, ಭದ್ರಾ ಜಲಾಶಯ ಇಲ್ಲೆಲ್ಲಾ ಎಷ್ಟರ ಮಟ್ಟಿನ ರಕ್ಷಣಾ ವ್ಯವಸ್ಥೆ ಇದೆ.
ಆಹಾ ಸೆಕ್ಯುಲರ್ ಇಂಡಿಯಾ, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ದೈನೇಸಿ ಸ್ಥಿತಿ ನೋಡಿ, ಭಯೋತ್ಪಾದನೆ, ದೇಶದ್ರೋಹದಂತಹ ಬೀಭತ್ಸ ಘಟನೆ ಎಲ್ಲೆಂದರಲ್ಲಿ ರಣಕೇಕೆ ಹಾಕುತ್ತಿದ್ದರೆ, ದರಿದ್ರ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಲೇ ಅಮಾಯಕರ ರಕ್ತಹೀರುವ ಉಗ್ರರ ಕೃತ್ಯಕ್ಕೆ ಇವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ.
ಅದಿಲ್ಲದಿದ್ದರೆ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಬೇಕು ಎಂಬ ಕೂಗಿಗೆ ಕಿವುಡರಂತೆ, ಈಗ ಇರುವ ನಮ್ಮ ಕಾನೂನೇ ಉಗ್ರರನ್ನು ಸದೆಬಡಿಯಲು ಬಲಿಷ್ಠವಾಗಿದೆ ಎಂಬ ಪೌರುಷದ ಮಾತುಗಳನ್ನಾಡುತ್ತಿದ್ದಾರೆ. ಪೋಟಾ ಬೇಡ, ಟಾಡಾ ಬೇಡ, ಫೆಡರಲ್ ಏಜೆನ್ಸಿ ಬೇಡ ಎಂದೆನ್ನುವ ಈ ಕಚ್ಚೆಹರುಕ ರಾಜಕಾರಣಿಗಳಿಗೆ ಮಾತ್ರ ಎನ್ಎಸ್‌ಜಿ ಬ್ಲ್ಯಾಕ್ ಕಮಾಂಡೋಗಳ ಭದ್ರಕೋಟೆಯ ರಕ್ಷಣೆ ಬೇಕು.
ಅಲ್ಲದೇ ಈ ಮೊದಲು ಉಗ್ರರು ನಡೆಸುತ್ತಿರುವ ದಾಳಿಯ ವೈಖರಿಯೇ ಬದಲಾಗಿದೆ ಎಂದ ಮೇಲೆ ನಮ್ಮ ಒಬಿರಾಯನ ಕಾಲಕ ರಕ್ಷಣಾ ವ್ಯವಸ್ಥೆ ಹಾಗೂ ಎಡಬಿಡಂಗಿ ಹೇಳಿಕೆ ನೀಡುತ್ತಲೇ ಕಾಲ ಕಳೆಯುತ್ತಿದ್ದರೆ ಜನಸಾಮಾನ್ಯರ ಗತಿ ಏನು? ಹಾಗೇ ಸ್ಫೋಟ ಕೃತ್ಯದ ಪ್ರಾಯಶ್ಚಿತ್ತ ಎಂಬಂತೆ ಗೃಹಸಚಿವ, ಉಪಮುಖ್ಯಮಂತ್ರಿ ತಲೆದಂಡದಿಂದ ಅದ್ಯಾವ ಪುರುಷಾರ್ಥ ಸಾಧ್ಯ.....
ಕೊನೆ ಹನಿ: ಮುಂಬೈ ದಾಳಿ ನಡೆದು ಮೂರು ದಿನ ಕಳೆದಿಲ್ಲ, ನಮ್ಮ ರಕ್ಷಣಾ ವ್ಯವಸ್ಥೆ, ಪೊಲೀಸರ ಕಾರ್ಯದಕ್ಷತೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿ, ಮಂಗಳವಾರದ ಟೈಮ್ಸ್ ಆಫ್ ಇಂಡಿಯಾ ನೋಡಿ. ಬಾಳಾಸಾಹೇಬ್ ಬೊರ್ಕರ್ ಎಂಬವರೊಬ್ಬರು ತಮ್ಮ ಪರವಾನಿಗೆ ಹೊಂದಿದ್ದ ಪಿಸ್ತೂಲ್ ಅನ್ನು ಜನನಿಬಿಡ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ಸ್ಟೇಶನೊಳಕ್ಕೆ ಸೊಂಟದಲ್ಲಿ ಅಡಗಿಸಿಟ್ಟು ತಂದಿದ್ದರು. ಅವರು ಕಳ್ಳ ಹಾದಿಯಿಂದಲೂ ಬಂದಿಲ್ಲ, ಮೆಟಲ್ ಡಿಟೆಕ್ಟರ್ ಮೂಲಕವೇ ಬಂದಿದ್ದರು, ಅದು ಬೀಪ್ ಬೀಪ್ ಶಬ್ದ ಹೊರಡಿಸಿತ್ತು, ಆದರೂ ನಮ್ಮ ಪೊಲೀಸರು ಅವರನ್ನು ಕರೆದು ವಿಚಾರಿಸುವ ಗೊಡವೆಗೂ ಹೋಗಿಲ್ಲ......ಹೀಗಾದರೆ ಭಾರತದ ಜನರನ್ನು ಅದ್ಯಾರು ರಕ್ಷಿಸುತ್ತಾರೋ.....
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು