Welcome, Guest   [ Register | Sign In | Take a tour | Adult Filter: On ]

ಅನಾಥ ಪ್ರಜ್ಞೆಯ ಶೂನ್ಯ ಭಾವ

ಬದುಕೆಂದರೆ ಒಂಟಿತನವಾ ? ಬದುಕೆಂದರೆ ನಿರಾಸೆಯಾ ? ಬದುಕೆಂದರೆ ದುಗುಡಗಳ ಗುಡಾಣವೇ? ಬದುಕೆಂದರೆ ವಂಚನೆಯಾ ? ಬದುಕೆಂದರೆ ಮೋಸವಾ ? ಬದುಕೆಂದರೆ ಲಾಭವಾ ? ಬದುಕೆಂದರೆ ಹೀಗಳೆಯುವಿಕೆಯಾ ? ಹೀಗೆ ಇದು ಬದುಕಿನ ಅಂತ್ಯವಿಲ್ಲದ ಯಾತ್ರೆಯ ಹಾಗೆ....ಅಲ್ಲಿ ಎಲ್ಲವೂ ಇರುತ್ತೆ, ಪ್ರತಿಯೊಬ್ಬನಲ್ಲೂ ವಂಚನೆ, ಪ್ರೀತಿ, ವಿಶ್ವಾಸ, ಪ್ರೇಮ, ಕಾಮ, ಅಸೂಯೆ, ದ್ವೇಷ ಎಲ್ಲವುಗಳು ಮಿಳಿತವಾಗಿರುತ್ತೆ. ಹಾಗೇ ಮನದ ಆಳದಲ್ಲೊಂದು ಒಂಟಿತನ ಕುಳಿತಿರುತ್ತದೆ....

ಭಾವನೆಗಳು ಅವರವರ ಭಾವಕ್ಕೆ ನಿಲುಕಿದಂತೆ, ಒಬ್ಬಂಟಿತನ, ಕ್ಷೋಭೆಗಳು ಆಗಾಗ ನಮ್ಮನ್ನು ಕಾಡುತ್ತಲೇ ಇರುತ್ತದೆ. ಇದು ಎಲ್ಲರೊಳಗೆ ಶೂನ್ಯ ಭಾವ ಸೃಷ್ಟಿಸುತ್ತೆ. ಆದರೆ ನನ್ನನ್ನು ವಿಪರೀತವಾಗಿ ಕಾಡುವುದು ತಂದೆ-ತಾಯಿ ಕಳೆದುಕೊಂಡವರ ಬಗ್ಗೆ. ಅವರನ್ನು ಕಾಡುವ ಅನಾಥ ಪ್ರಜ್ಞೆ ಇದೆಯಲ್ಲಾ ಅದು ಯಾತನಾದಾಯಕವಾದದ್ದು. ತಂದೆ-ತಾಯಿ, ಅಂದು-ಬಂಧು, ಗೆಳೆಯ-ಗೆಳೆತಿಯರು ಇದ್ದೂ ಕಾಡುವ ಅನಾಥ ಪ್ರಜ್ಞೆಗೂ. ತಂದೆ-ತಾಯಿಯರು ಇಲ್ಲದೆಯೇ ಕಾಡುವ ಅನಾಥ ಪ್ರಜ್ಞೆಗೆ ಅಜ-ಗಜಾಂತರ ವ್ಯತ್ಯಾಸ ಇದೆ. ತಂದೆ-ತಾಯಿ ಇದ್ದೂ ನಮ್ಮನ್ನು ಒಂಟಿತನ, ಶೂನ್ಯ ಭಾವ ಕಾಡುತ್ತೆ ಅಂತಾದರೆ ಅದು ಅವರೆಡೆಗೆ ಹುಟ್ಟಿಕೊಂಡ ತಿರಸ್ಕಾರ ಭಾವ ಅಂತಲೇ ಅರ್ಥ. ಎಲ್ಲ ತಂದೆ-ತಾಯಿಯಂದಿರು ಮಕ್ಕಳೆಡೆಗೆ ಅಥವಾ ಕುಟುಂಬಿಕರೊಡನೆ ತೋರುವ ಪ್ರೀತಿ ಒಂದೇ ತೆರನಾಗಿರುವುದಿಲ್ಲ. ಅಲ್ಲಿಯೂ ಎಲ್ಲವೂ ಇರುತ್ತದೆ.

ಹಾಗೆಯೇ ನಿಷ್ಕಲ್ಮಶವಾದ ಪ್ರೀತಿಯ ಸೆಲೆಯೂ ಇರುತ್ತೆ. ಆದರೆ ತಂದೆ-ತಾಯಿ ಕಳೆದುಕೊಂಡವರನ್ನು ಆಗಾಗ ಕಾಡುವ ಅನಾಥ ಭಾವ ಇದೆಯಲ್ಲ ಅಲ್ಲಿ ನಿಜಕ್ಕೂ ನೋವಿದೆ, ಸಂಕಟವಿದೆ, ಮಾತೃ ವಾತ್ಸಲ್ಯದ ಹಳಹಳಿಕೆಯ ಗೋಗೆರೆತ ಎಲ್ಲವೂ ಮಿಳಿತವಾಗಿರುತ್ತದೆ. ಅಂತವರಿಗೆ ಯಾವ ಚಿಕ್ಕಮ್ಮ-ಚಿಕ್ಕಪ್ಪ, ಸಹೋದರ-ಸಹೋದರಿ, ನೆರೆ-ಕರೆಯವರು ಸೇರಿದಂತೆ ಯಾರಿಗೂ ತಂದೆ-ತಾಯಿಯ ಪ್ರೀತಿ, ವಾತ್ಸಲ್ಯ,ಕರುಣೆಯನ್ನು ತೋರಿಸಲು ಸಾಧ್ಯವಿಲ್ಲ(ಇದ್ದರೂ ಇರಬಹುದು ಆದರೆ ಆ ರೀತಿಯ ವಾತ್ಸಲ್ಯ ದೊರೆತರೆ ಅಂತವರು ಪುಣ್ಯವಂತರೇ) . ಅಂತಹ ಮನಸ್ಸುಗಳ ಹೃದಯ ಒಳಗೊಳಗೆ ನೋವನ್ನು ಅನುಭವಿಸುತ್ತಿರುತ್ತದೆ. ವೇದನೆಯಿಂದ ನರಳುತ್ತಿರುತ್ತದೆ ಆಗಲೇ ಮನದಾಳದಲ್ಲಿ ನಿಧಾನಕ್ಕೆ ಶೂನ್ಯ ಭಾವ ಆವರಿಸಿಕೊಳ್ಳತೊಡಗುತ್ತೆ.....ಅದು ಅನಾಥ ಪ್ರಜ್ಞೆ...ಇದು ಅಂತ ರಚ್ಚೆ ಹಿಡಿದ ಮಕ್ಕಳಂತೆ ನಾವೇನು ದುಃಖ, ದುಗುಡ, ದುಮ್ಮಾನ ಅಂತ ಹೇಳುತ್ತಿರುತ್ತೇವಲ್ಲ, ಅವೆಲ್ಲಕ್ಕಿಂತ ಭಿನ್ನವಾದದ್ದು.

ನನ್ನ ಶಾಲಾ ದಿನಗಳಲ್ಲಿ ಮನೋಹರ ಎಂಬಾತನನ್ನು ಕಾಡುತ್ತಿದ್ದದ್ದೂ ಇದೇ ಅನಾಥ ಪ್ರಜ್ಞೆ. ಆತ ಎಲ್ಲರಂತೆ ಖುಷಿಯಾಗಿದ್ದ, ಆದರೆ ಅದೊಂದು ದಿನ ಆತ ಅಂಗಡಿಗೆ ಯಾವುದೋ ವಸ್ತು ತರಲು ಹೋದಾಗ ಒಬ್ಬ ತಲೆಹಿಡುಕ, ಆತನನ್ನು ಚೆನ್ನಾಗಿ ಬೈದು, ನೋಡಿ ಈ ಮಗು ಯಾರಿಗೆ ಹುಟ್ಟಿದ್ದೋ ಏನೋ ಅನಾಥ.....ಮತ್ತೊಬ್ಬರ ಮನೆಯಲ್ಲಿ ಬೆಳೆಯುತ್ತಿದ್ದಾನೆ ಎಂಬುದಾಗಿ ಹೇಳಿದ್ದ. ಆ ದಿನವೇ ಆತನಿಗೆ ತಿಳಿದದ್ದು ತಾನು ಕ್ರೈಸ್ತ ದಂಪತಿಗಳ ನಿಜವಾದ ಮಗನಲ್ಲ, ತನ್ನ ಹೆತ್ತವರು ಬೇರೆಯವರು ಎಂಬುದಾಗಿ. ಆ ನಂತರ ಆತನನ್ನ ಆವರಿಸಿಕೊಂಡ ಅನಾಥ ಪ್ರಜ್ಞೆಯ ಶೂನ್ಯ ಭಾವದಿಂದಾಗಿ ಆತ ಊರು ಬಿಟ್ಟೇ ಹೋಗುವಂತಾಯಿತು. ಈ ಘಟನೆ ನಡೆದು ಇಂದಿಗೆ 23ವರ್ಷ ಕಳೆದಿದೆ. ಇದೀಗ ಆತ ವಾಪಸು ಬಂದರೂ ಕೂಡ ಆತನ ಸಾಕಿದ ತಂದೆ-ತಾಯಿಗಳೂ ಇಲ್ಲ - ಅತ್ತ ನಿಜವಾದ ಹೆತ್ತವರೂ ಇಲ್ಲ.....ಈಗ ಹೇಳಿ ಎಲ್ಲರೂ ಇದ್ದೂ ಕಾಡುವ ಅನಾಥ ಪ್ರಜ್ಞೆ ಹ್ಯಾಗೆ...ತಮ್ಮವರು ಇಲ್ಲದೆ ಕಾಡುವ ಅನಾಥ ಪ್ರಜ್ಞೆ ಹ್ಯಾಗೆ....

ಪ್ರತಿಸ್ಪಂದನಗಳು

Re: ಅನಾಥ ಪ್ರಜ್ಞೆಯ ಶೂನ್ಯ ಭಾವ
ತಂದೆ, ತಾಯಿ ಇಲ್ಲದವರಿಗೆ ಕಾಡುವ ಅನಾಥ ಪ್ರಜ್ಞೆ ಸಹಜವಾದದ್ದು, ಆದರೆ ಗುಂಪಿನೊಳಗಿದ್ದು ಒಂಟಿಯಾಗಿರುವವರು ಎಲ್ಲರೂ ಇದ್ದು ಏನನ್ನೊ ಕಳೆದುಕೊಂಡಂತಿರುವವರಿಗೆ ತಮ್ಮ ಈ ಖಾಲಿ ಭಾವಕ್ಕೆ ಕಾರಣವೇನೆಂಬುದರ ಸ್ವತಃ ಅವರಿಗೆ ಗೊಂದಲವಿರಬಹುದು. ತಂದೆ ತಾಯಿ ಇಲ್ಲದವರು ಆ ನಿಜವನ್ನು ತಮ್ಮ ಭಾಗ್ಯವೆಂದು ಒಂದು ದಿನ ಒಪ್ಪಿಕೊಂಡು ಬಿಡಬಹುದು ಆದರೆ ಇದ್ದೂ ಇಲ್ಲದಿರವಂತಹವರು, ನಿರೀಕ್ಷೆ, ನಿರಾಸೆಗಳ ತೊಳಲಾಟದಲ್ಲಿರುವವರು... ananya
Re: ಅನಾಥ ಪ್ರಜ್ಞೆಯ ಶೂನ್ಯ ಭಾವ
ಡಿಯರ್ ತ್ರಾಸಿ, ನಿಮ್ಮ ಪ್ರಶ್ನೆಗಳೆಲ್ಲವೂ ಸರಿ. ಆದರೂ, ಬದುಕೆಂಬುದು ನಾವು ಬಗೆದಂತಿರುತ್ತದೆ! -ಚಂದ್ರ
ಹಕ್ಕು ನಿರಾಕರಣೆ